ಬಹಾಯಿ ಧರ್ಮ -
ಪರ್ಷಿಯಾ ದೇಶದಲ್ಲಿ ಬಹವುಲ್ಲಾ ಅವರಿಂದ 19ನೆಯ ಶತಮಾನದಲ್ಲಿ ಸ್ಥಾಪಿತವಾದ ಒಂದು ಧರ್ಮ. ದೇವರು ಒಬ್ಬ, ವಿಶ್ವದಲ್ಲಿರುವ ಎಲ್ಲ ಧರ್ಮಗಳೂ ಒಂದೇ, ವಿಶ್ವ ಒಂದು ರಾಷ್ಟ್ರ. ಆ ರಾಷ್ಟ್ರದಲ್ಲಿರುವ ಪ್ರಜೆಗಳೆಲ್ಲರೂ ಒಂದೇ ಮಾನವ ಕುಲಕ್ಕೆ ಸೇರಿದವರು ಎಂಬುದು ಇದರ ಸಂದೇಶ.

	ಈ ಧರ್ಮ ಬಾಬೀ ಧರ್ಮದಿಂದ ಪ್ರಭಾವಿತವಾದ ಒಂದು ಧಾರ್ಮಿಕ ಸುಧಾರಣೆ. ಬಾಬೀ ಧರ್ಮ ಬಾಬ್ ಎಂದು ಪರ್ಷಿಯಾದ ಷಿರಾಜ್ ನಗರದಲ್ಲಿ ಪ್ರಸಿದ್ಧಿ ಪಡೆದಿದ್ದ ಮಿರ್ಜಾ ಅಲಿ ಮಹಮದ್ ಎಂಬುವರಿಂದ 1844ರಲ್ಲಿ ಸ್ಥಾಪಿತವಾಯಿತು. ಬಾಬ್‍ರವರು ತಮ್ಮ ಆಪ್ತಶಿಷ್ಯನಾದ ಮುಲ್ಲಾಹುಸೇನ್ ಮತ್ತು ಇತರ ಹದಿನೆಂಟು ಮಂದಿ ಶಿಷ್ಯರಿಗೆ ಹೀಗೆ ತಿಳಿಸಿದರು: ವಿಶ್ವದ ಎಲ್ಲ ಮಾನವರನ್ನೂ ಒಂದುಗೂಡಿಸಲು ಅವತರಿಸುವನೆಂದು ಕುರಾನ್ ಮತ್ತು ಇತರ ಧರ್ಮಗ್ರಂಥಗಳು ಭರವಸೆ ನೀಡಿರುವ, ನನಗಿಂತಲೂ ಮಹಾತ್ಮನಾದವನನ್ನು ಪ್ರಪಂಚ ಅರಿಯುವುದು ನನ್ನ ಮೂಲಕವೇ; ಆ ಮಹಾಪುರುಷ ಮುಂದೆ ಸ್ಥಾಪಿಸುವ ನೂತನ ಧಾರ್ಮಿಕ ಸಂಪ್ರದಾಯಕ್ಕೆ ನಾನು ಒಂದು ಬಾಗಿಲು (ಬಾಬ್ ಎಂದರೆ ಬಾಗಿಲು ಎಂದರ್ಥ). ಬಾಬ್‍ರವರ ಈ ಘೋಷಣೆ ಅದದ್ದು 1844 ಮೇ 22ರಂದು ಸೂರ್ಯಸ್ತದ ಬಳಿಕ. ಬಹಾಯಿಗಳಿಗೆ ಈ ದಿನ ಒಂದು ಪವಿತ್ರದ ದಿನ. ಬಾಬ್‍ರವರ ಪ್ರಸಿದ್ಧಿ ಪರ್ಷಿಯಾ ದೇಶದಲ್ಲಿ ತುತ್ತತುದಿಯನ್ನು ಮುಟ್ಟಿದಾಗ ಮತಾಂಥ ಮುಲ್ಲಾಗಳಿಂದ ತುಂಬಿಹೋಗಿದ್ದ ಪರ್ಷಿಯಾ ಸರ್ಕಾರ ಬಾಬ್‍ರವರ ಹತ್ಯೆಯನ್ನು ನಡೆಸಿತು. (9-7-1850). ಅವರ ಅನೇಕ ಅನುಚರರನ್ನು ಗಡೀಪಾಯ ಮಾಡಿತು.

	ಬಹಾವುಲ್ಲಾ ಪರ್ಷಿಯಾ ದೇಶದ ಮಂತ್ರಿಯೊಬ್ಬರ ಮಗ. ಹುಟ್ಟಿದ್ದು 1817 ನವಂಬರ್ 12ರಂದು. ತಂದೆ ಮೃತರಾದ ಬಳಿಕ ಸರ್ಕಾರ ಇವರನ್ನು ತಂದೆಯ ಸ್ಥಾನಕ್ಕೆ ಆಹ್ವಾನಿಸಿತು. ಆದರೆ ಬಹಾವುಲ್ಲಾ ಅದನ್ನು ನಿರಾಕರಿಸಿದರು. ಬಹಾವುಲ್ಲಾ ತಮ್ಮ ಮೂವತ್ತನೆಯ ವಯಸ್ಸಿನಲ್ಲಿ ಬಾಬ್‍ರವರ ಕಟ್ಟಾ ಅನುಚರರಾದರು. ಬಾಬ್ ಮತ್ತು ಬಹಾವುಲ್ಲಾ ಪರಸ್ಪರ ಭೇಟಿ ಮಾಡಲಿಲ್ಲವಾದರೂ ಅವರ ನಡುವೆ ಪತ್ರ ಸಂಪರ್ಕವಿತ್ತೆಂದು ಹೇಳಲಾಗಿದೆ. ಬಹಾವುಲ್ಲಾ ಕೂಡ ಬಾಬ್‍ರವರ ಇತರ ಅನುಚರರಂತೆ ಅನೇಕ ಶಿಕ್ಷೆಗಳನ್ನು ಅನುಭವಿಸಿದರು. ನಾಲ್ಕು ತಿಂಗಳು ಕಾರಾಗೃಹ ವಾಸ ಅನುಭವಿಸಿದ ಇವರನ್ನು ಇತರ ಬಾಬ್ ಮತ್ತು ಇತರ ಪವಿತ್ರ ಗ್ರಂಥಗಳು ಭವಿಷ್ಯ ನುಡಿದಿದ್ದ ಮಹಾತ್ಮ ತಾವೇ ಎಂಬುದು ದೈವಿಕವಾಗಿ ಗೋಚರವಾಯಿತೆಂದೂ ಈ ರಹಸ್ಯವನ್ನು ಅವರು ತಮ್ಮ ಆಪ್ತ ಸ್ನೇಹಿತರ ಹೊರತಾಗಿ ಇನ್ನಾರಿಗೂ ತಿಳಿಸಲಿಲ್ಲವೆಂದೂ ಹೇಳುತ್ತಾರೆ.

	ಬಾಗ್ದಾದಿನಲ್ಲಿ ಇವರು ಬಹುಬೇಗ ಪ್ರಸಿದ್ಧರಾದರು. ಇದರಿಂದ ಸರ್ಕಾರ ಮತ್ತೂ ಕೆರಳಿತು. ಇವರನ್ನು ಕಾನ್‍ಸ್ಟಾಂಟಿನೋಪಲಿಗೆ ವರ್ಗಾಯಿಸಲಾಯಿತು. ಬಹಾವುಲ್ಲಾರು ಕಾನ್‍ಸ್ಟಾಂಟಿನೋಪಲಿಗೆ ತೆರಳುವ ಮುನ್ನ ಪರ್ಷಿಯಾದ ಕಾರಾಗೃಹದಲ್ಲಿ ತಮಗುಂಟಾದ ದೈವಿಕ ಅನುಭವದ ವಿಷಯವನ್ನು ತಮ್ಮ ಅಂತಿಮ ದರ್ಶನ ಪಡೆಯಲೆಂದು ಅಲ್ಲಿಯ ರಿದ್ವಾನ್ ಎಂಬ ತೋಟದಲ್ಲಿ ನೆರೆದಿದ್ದ ಸಹಸ್ರಾರು ಅಭಿಮಾನಿಗಳಿಗೆ ತಿಳಿಸಿದರು. ಬಹಾವುಲ್ಲಾರು ತಮ್ಮ ನೂತನ ಧಾರ್ಮಿಕ ಸಂಸ್ಥೆಯನ್ನು ಘೋಷಿಸಿಕೊಂಡ ದಿನವನ್ನು ರಿದ್ವಾನ್ ಮೊದಲನೆಯ ದಿನ (21-4-1863) ಎಂದು ಕರೆಯುತ್ತಾರೆ. ಬಹಾಯಿಗಳಿಗೆ ಇದೂ ಒಂದು ಹಬ್ಬದದಿನ.

	ಅನಂತರ ಕಾನ್‍ಸ್ಟಾಂಟಿನೋಪಲಿನಿಂದ ಬಹಾವುಲ್ಲಾರನ್ನು ಅಡ್ರಿಯನೋಪಲ್ಲಿಗೆ ಸ್ಥಳಾಂತರಿಸಲಾಯಿತು (1864). 1868ರಲ್ಲಿ ಇವರನ್ನೂ ಇವರ ಅನುಚರರನ್ನೂ ದುಷ್ಟರ ಶಿಕ್ಷಾನೆಲೆಯಾಗಿದ್ದ ಆಕ್ರಾಗೆ ಕಳುಹಿಸಲಾಯಿತು. ಆಕ್ರಾದ ಬಂದೀಖಾನೆಯಲ್ಲಿ ಬಹಾವುಲ್ಲಾ ಮತ್ತು ಅವರ ಅನುಚರರು ಅನೇಕ ಶಿಕ್ಷೆಗಳನ್ನು ಅನುಭವಿಸಿದರು. ಆದರೆ ಕ್ರಮೇಣ ಅಲ್ಲಿಯ ಪಾಷಂಡಿಗಳೆನಿಸಿದ್ದ ಸೆರೆಮನೆಯ ಸೇವಕರು ಮತ್ತು ಅಧಿಕಾರಿಗಳು ಬಹಾವುಲ್ಲರ ಬೋಧನೆಗಳಿಂದ ಪರಿವರ್ತಿತರಾದರು. ಸರ್ಕಾರದ ಆಜ್ಞೆಗಳನ್ನು ಉಲ್ಲಂಘಿಸಿ ಬಹಾವುಲ್ಲಾ ಮತ್ತು ಅವರ ಅನುಚರರನ್ನು ಸೆರೆಮನೆಯಿಂದ ಬಿಡುಗಡೆ ಮಾಡಿದರು. ಆಕ್ರಾದಲ್ಲಿ ಬೌದ್ಧ, ಪಾರಸೀ, ಮುಸಲ್ಮಾನರಂಥ ಇತರ ಪಂಥೀಯರು ಇವರ ಅನುಚರರಾದರು. ಆಕ್ರಾದ ಸೆರೆಮನೆಯಲ್ಲಿ ಬಹಾವುಲ್ಲಾರು ಒಂಬತ್ತು ವರ್ಷಗಳಕಾಲ ಇದ್ದರು.

ಸೆರೆಮನೆಯಿಂದ ಹೊರಬಂದ ಮೇಲೆ ಅವರ ದರ್ಶನ ಭಾಗ್ಯ ಪಡೆದ ಅನೇಕ ಗಣ್ಯವ್ಯಕ್ತಿಗಳಲ್ಲಿ ಪೌರಸ್ತ್ಯ ಭಾಷಾ ಸಾಹಿತ್ಯಗಳ ಪಂಡಿತ ಎಡ್ವರ್ಡ್ ಜಿ.ಬ್ರೌನ್ ಒಬ್ಬರು. ಬಹಾವುಲ್ಲಾರವರು ತಮ್ಮ ಕಡೆಯ ದಿನಗಳನ್ನು ಆಕ್ರಾದ ಹತ್ತಿರದಲ್ಲಿರುವ ಬಾಹ್‍ಜೀ ಎಂಬಲ್ಲಿ ಕಳೆದು 1892 ಮೇ 29ರಂದು ನಿಧನರಾದರು.

	ಬಹಾವುಲ್ಲಾರು ನಿಧನರಾಗುವ ಮುನ್ನ ಒಂದು ಉಯಿಲಿನಲ್ಲಿ ತಮ್ಮ ಲೇಖನಗಳಿಗೆ ವ್ಯಾಖ್ಯಾನ ನೀಡುವ ಸ್ವಾತಂತ್ರ್ಯವನ್ನು ತಮ್ಮ ಪುತ್ರ ಅಬ್ದುಲ್ ಬಹಾ ಅವರಿಗೆ ನೀಡಿದ್ದರು. ಅಬ್ದುಲ್ ಬಹಾ ಹುಟ್ಟಿದಾಗಿನಿಂದಲೂ ತಂದೆಯೊಡನೆಯೇ
ಇದ್ದುದರಿಂದ ತಂದೆ ಅನುಭವಿಸಿದ ಅನೇಕ ಕಷ್ಟಗಳನ್ನು ತಾವೂ ಅನುಭವಿಸಿದರು. ಬಹಾವುಲ್ಲಾ ನಿಧನರಾದ ಮೇಲೂ ಪರ್ಷಿಯಾ ಸರ್ಕಾರ ಇವರನ್ನು ಆಕ್ರಾದಲ್ಲೇ ಬಂಧನದಲ್ಲಿರಿಸಿತ್ತು. ಆದರೆ ಯುವಟರ್ಕ್ ಕ್ರ್ರಾಂತಿಯಿಂದಾಗಿ ಪರ್ಷಿಯಾದ ಹಳೆಯ ಸರ್ಕಾರ ಉರುಳಿತು. ಹೊಸ ಸರ್ಕಾರ ಇವರನ್ನು ಬಂಧನದಿಂದ ಬಿಡುಗಡೆ ಮಾಡಿದಾಗ ಅಬ್ದುಲ್ ಬಹಾರಿಗೆ ಅರುವತ್ತನಾಲ್ಕರ ವಾರ್ಧಕ್ಯ. ಬಿಡುಗಡೆಯಾದ ಮೇಲೆ ಅಬ್ದುಲ್ ಬಹಾ ಧರ್ಮಪ್ರಜಾರ ಕಾರ್ಯದಲ್ಲಿ ತೊಡಗಿದರು. ಬಹಾಯಿಧರ್ಮವನ್ನು ಕುರಿತ ಅನೇಕ ಲೇಖನ ಬರೆದರು. ತಮ್ಮ ಎಪ್ಪತ್ತರ ಮುಪ್ಪಿನಲ್ಲೂ ಈಜಿಪ್ಟ್, ಯೂರೋಪ್ ಮತ್ತು ಅಮೆರಿಕ ದೇಶಗಳನ್ನು ಸುತ್ತಿದರು. ಆ ದೇಶಗಳಲ್ಲಿ ಬಹಾಯಿಧರ್ಮವನ್ನು ಕುರಿತು ಅನೇಕ ಉಪನ್ಯಾಸ ನೀಡಿದರು. ಇವರು ಉಯಿಲಿನಲ್ಲಿ ತಮ್ಮ ಮಗಳ ಮಗನಾದ ಷೋಘಿ ಎಫೆಂಡಿಯವರನ್ನು ಧರ್ಮರಕ್ಷಕರನ್ನಾಗಿ ನೇಮಿಸಿ 1921ರಲ್ಲಿ ನಿಧನರಾದರು.

	ಷೋಘಿಯವರ ಅವಿಶ್ರಾಂತ ದುಡಿಮೆಯಿಂದಾಗಿ ಬಹಾಯಿಧರ್ಮ ಪ್ರಪಂಚಾದ್ಯಂತ ಹರಡಿ ಅನೇಕ ಬಹಾಯಿ ಕೇಂದ್ರಗಳು ಸ್ಥಾಪಿತವಾದುವು. ಇಂದು ಬಹಾಯಿ ಧರ್ಮರಕ್ಷಣೆಗೆಂದು ಇರುವುದು ಒಂದು ಆಡಳಿತ ವ್ಯವಸ್ಥೆ. ವಿಶ್ವಸಂಸ್ಥೆಯ ಮಾನ್ಯತೆ ಪಡೆದಿರುವ ಈ ಆಡಳಿತ ಕೇಂದ್ರ ಪವಿತ್ರ ಭೂಮಿಯಲ್ಲಿದೆ. ಈ ಧರ್ಮ ಪೌರೋಹಿತ್ಯವನ್ನು ನಿಷೇಧಿಸುತ್ತದೆ. ಪೌರೋಹಿತ ಶೋಷಣೆ, ಉಚ್ಚನೀಚವೆಂಬ ಭೇದಭಾವ, ಅಂಧಾನುಕರಣೆ. ಗುಂಪುಗುಳಿತನ-ಇವುಗಳಲ್ಲಿ ಪರ್ಯವಸಾನವಾಗುವುದೆಂದು ತಿಳಿದ ಬಹಾಯಿಗಳು ಈ ದೋಷಗಳಿಗೆ ಎಡೆ ಮಾಡಿಕೊಡದಂಥ ಒಂದು ಆಡಳಿತ ವ್ಯವಸ್ಥೆ ರೂಪಿಸಿದ್ದಾರೆ. ಇದು ದೈವಮೂಲದಿಂದ ರೂಪಿಸಲ್ಪಟ್ಟಿದೆ ಎಂದು ಇವರ ನಂಬಿಕೆ. ಏಕೆಂದರೆ ಇವರ ಪ್ರಕಾರ ಬಹಾಯಿ ಆಡಳಿತ ವ್ಯವಸ್ಥೆಗೆ ಸುಭದ್ರ ತಳಹದಿ ಒದಗಿಸಿದವರು ದೇವರ ಅವತಾರವಾದ ಬಹಾವುಲ್ಲಾ.

	ಬಹಾಯಿ ಆಡಳಿತ ಸ್ಥಳೀಯ ಧಾರ್ಮಿಕ ಸಮಿತಿ, ರಾಷ್ಟ್ರೀಯ ಧಾರ್ಮಿಕ ಸಮಿತಿ ಮತ್ತು ವಿಶ್ವನ್ಯಾಯ ಮಂದಿರ ಎಂಬ ಮೂರು ಭಾಗಗಳಲ್ಲಿ ಕೇಂದ್ರೀಕೃತಗೊಂಡಿದೆ. 

	ಪ್ರತಿಯೊಂದು ಧಾರ್ಮಿಕ ಸಮಿತಿಯಲ್ಲಿಯೂ ಒಂಬತ್ತು ದಿನ ಚುನಾಯಿತ ಸದಸ್ಯರಿರುತ್ತಾರೆ. ಚುನಾಯಿತ ಮತ್ತು ಚುನಾಯಿಸುವ ಬಹಾಯಿಗಳು 21 ವರ್ಷ ವಯಸ್ಸುಳ್ಳವರಾಗಿರಬೇಕು. ಚುನಾವಣೆಯಲ್ಲಿ ಪ್ರಚಾರವಿರುವುದಿಲ್ಲ. ಸತ್ಯಸಂಧತೆ, ಪ್ರಾಮಾಣಿಕತೆ, ಬಹಾಯಿಧರ್ಮದಲ್ಲಿ ನಿಷ್ಠೆ-ಇವುಗಳ ಆಧಾರದಿಂದ ಸದಸ್ಯರನ್ನು ಚುನಾಯಿಸಲಾಗುತ್ತದೆ. ಚುನಾವಣೆ ವಾರ್ಷಿಕ. ರಾಷ್ಟ್ರೀಯ ಧಾರ್ಮಿಕ ಸಮಿತಿಯ ಸದಸ್ಯರು ಸ್ಥಳೀಯ ಧಾರ್ಮಿಕ ಸಮಿತಿಗಳ ಪ್ರತಿನಿಧಿಗಳಿಂದಲೂ, ವಿಶ್ವನ್ಯಾಯಮಂದಿರದ ಸದಸ್ಯರು ರಾಷ್ಟ್ರೀಯ ಧಾರ್ಮಿಕ ಸಮಿತಿಗಳ ಪ್ರತಿನಿಧಿಗಳಿಂದಲೂ ಚುನಾಯಿಸಲ್ಪಡುತ್ತಾರೆ.

	ಈ ಧಾರ್ಮಿಕ ಸಮಿತಿಗಳು ನಿರ್ವಹಿಸಬೇಕಾದ ಕೆಲವು ಕರ್ತವ್ಯಗಳಿವು: ಪ್ರತಿಯೊಬ್ಬನಿಗೂ ಬಹಾಯಿ ತತ್ತ್ವ ತಿಳಿಯುವಂತೆ ಮಾಡುವುದು. ಬಹಾಯಿಗಳಲ್ಲಿ ಸಾಮರಸ್ಯ ನೆಲಸುವಂತೆ ಮಾಡುವುದು, ಸಮಾಜದ ಹಿತಕ್ಕಾಗಿ ನಿಧಿ ಸಂಗ್ರಹಿಸುವುದು. ಬಹಾಯಿ ಮಕ್ಕಳಿಗೆ ಮತ್ತು ಯುವಕರಿಗೆ ಶಿಕ್ಷಣ ಸೌಲಭ್ಯ ಒದಗಿಸುವುದು, ಕಾಲಕಾಲಕ್ಕೆ ಸಭೆ ಸೇರಿಸುವುದು, ಹಬ್ಬ ಮತ್ತು ವಾರ್ಷಿಕೋತ್ಸವ ಅಚರಿಸುವುದು.

	ಈ ಧರ್ಮದ ಬೋಧನೆಗಳು ಹೀಗಿವೆ. (1) ದೇವರು : ಬಹಾಯಿಗಳ ಪ್ರಕಾರ ದೇವರು ಒಬ್ಬನೇ. ಅವನು ಪ್ರಪಂಚಾತೀತ. ಅವನೇ ಜಗತ್ತಿನ ಸೃಷ್ಟಿ ಸ್ಥಿತಿ ಮತ್ತು ಲಯಗಳಿಗೆ ಕಾರಣ. ಪರಮಾತ್ಮ ಪ್ರೀತಿ, ಕರುಣೆ, ನ್ಯಾಯ ಮುಂತಾದ ಗುಣಗಳಿಂದ ಕೂಡಿರುವನು. ಇವನನ್ನು ಅರಿಯುವುದೇ ಮಾನವನ ಉದ್ದೇಶ.

	(2) ಅವತಾರ: ಬಹಾಯಿಗಳ ಅವತಾರ ಕಲ್ಪನೆಗೂ ಹಿಂದೂಗಳ ಅವತಾರ ಕಲ್ಪನೆಗೂ ವ್ಯತ್ಯಾಸ ಉಂಟು. ಹಿಂದುಗಳ ಪ್ರಕಾರ ಜಗತ್ತಿನಲ್ಲಿ ಧರ್ಮಗ್ಲಾನಿ ಉಂಟಾದಾಗ ಪರಮಾತ್ಮನೇ ಸಾಕ್ಷಾತ್ತಾಗಿ ಭೂಲೋಕಕ್ಕೆ ಇಳಿಯುವನು. ಆದರೆ ಬಹಾಯಿಗಳ ಪ್ರಕಾರ ವಿಶ್ವಾತೀತನಾದ ಪರಮಾತ್ಮ ಧರ್ಮಸಂಸ್ಥಾಪನೆಗೆಂದು ಸಾಕ್ಷಾತ್ತಾಗಿ ಭೂಲೋಕಕ್ಕೆ ಇಳಿದುಬರುವುದಿಲ್ಲ. ಆ ಉದ್ದೇಶಕ್ಕೆಂದು ತನ್ನ ಪ್ರತಿನಿಧಿಯನ್ನು ಕಳುಹಿಸುವನು. ಅವನೇ ಅವತಾರ ಪುರುಷ.

	ಈ ಅವತಾರ ಪುರುಷ ಪರಮಾತ್ಮನ ಲಕ್ಷಣಗಳನ್ನು ತನ್ನ ಜೀವನದಲ್ಲಿ ಪ್ರತಿಬಿಂಬಿಸುತ್ತಾನೆ. ಅವನು ಒಂದು ಸ್ವಚ್ಛ ಕನ್ನಡಿಯಂತೆ. ಸೂರ್ಯನಿಗೆ ಎದುರಾಗಿರುವ ಕನ್ನಡಿ ಸೂರ್ಯ ಕೆಳಗೆ ಇಳಿದುಬರದಿದ್ದರೂ ಸೂರ್ಯನ ಲಕ್ಷಣವಾದ ಬೆಳಕನ್ನು ಪ್ರತಿಬಿಂಬಿಸುವಂತೆ, ಪರಮಾತ್ಮ ಭೂಲೋಕಕ್ಕೆ ಇಳಿದು ಬರದಿದ್ದರೂ ಅವತಾರಪುರುಷ ದಯೆ, ಪ್ರೀತಿ ಮುಂತಾದ ಪರಮಾತ್ಮನ ಗುಣಗಳನ್ನು ತನ್ನ ಜೀವನದಲ್ಲಿ ಪ್ರತಿಬಿಂಬಿಸುತ್ತಾನೆ. ಈ ಗುಣಗಳನ್ನು ಪರಮಾತ್ಮನ ಪ್ರಕಟಣೆಗಳು ಎಂದು ಬಹಾವುಲ್ಲಾ ಕರೆಯುತ್ತಾರೆ. ಪ್ರಪಂಚದ ಜನರು ಇವನ ಮೂಲಕವೇ ಪರಮಾತ್ಮನನ್ನು ಅರಿಯಲು ಸಾಧ್ಯ. ಇವನ ಉಪದೇಶಗಳನ್ನು ಜನರು ಪಾಲಿಸಿದಲ್ಲಿ ಅವರಿಗೆ ದೈವಸನ್ನಿಧಿ ಸಾಧ್ಯ. ಕೆಲವು ಕಡೆ ಅವತಾರಪುರಷನಿಗೂ ಪರಮಾತ್ಮನಿಗೂ ಭೇದವೇ ಇಲ್ಲ. ಅವತಾರ ಪುರುಷನನ್ನು ಅರಿತರೆ ಪರಮಾತ್ಮನನ್ನೆ ಅರಿತಂತೆ ಎಂದು ಹೇಳಲಾಗಿದೆ.

	ಬಹಾಯಿಗಳ ಪ್ರಕಾರ ಮಹಾತ್ಮನ ಅವತಾರ ವಿಶ್ವದ ಯಾವುದೇ ಒಂದು ನೆಲೆ ಅಥವಾ ಜನಾಂಗಕ್ಕೆ ಸೀಮಿತವಿಲ್ಲ. ಧರ್ಮಕ್ಕೆ ಆಪತ್ತು ಒದಗಿರುವ ವಿಶ್ವದ ಯಾವುದೇ ನೆಲೆ ಅಥವಾ ಯಾವುದೇ ಜನಾಂಗದಲ್ಲಿ ಮಹಾತ್ಮನೊಬ್ಬನ ಅವತಾರ ಸಾಧ್ಯ. ಇವುಗಳಲ್ಲಿ ಮೇಲು ಕೀಳು ಎಂಬ ವ್ಯತ್ಯಾಸವಿಲ್ಲ. ಇವರೆಲ್ಲ ಧರ್ಮ ರಕ್ಷಣೆಗೆಂದು ಒಬ್ಬನೇ ಪರಮಾತ್ಮನಿಂದ ವಿವಿಧ ಕಾಲಗಳಲ್ಲಿ ವಿವಿಧ ಸ್ಥಳಗಳಿಗೆ ಕಳುಹಿಸಲ್ಪಟ್ಟ ಪರಮಾತ್ಮನ ಪ್ರತಿನಿಧಿಗಳು. ಹೀಗೆ ಬಹಾಯಿಗಳು ಇತರ ಧರ್ಮಗಳ ಶ್ರೇಷ್ಠ ಪುರುಷರನ್ನು ಅವತಾರಪುರುಷರೆಂದು ಒಪ್ಪಿಕೊಳ್ಳುತ್ತಾರಾದರೂ ಅವರ ಪ್ರಕಾರ ಬಹವುಲ್ಲಾರ ಅವತಾರದಲ್ಲೆ ಜಗತ್ತಿನಲ್ಲಿ ನವಯುಗೋದಯವಾಗುವುದು.

	ಅವತಾರಪುರುಷರು ಧರ್ಮಸ್ಥಾಪಕರೂ ಹೌದು. ಅವತಾರಪುರುಷರಿಂದ ಸ್ಥಾಪಿತವಾದ ಧರ್ಮಗಳಲ್ಲಿ ಪ್ರಗತಿಪರತೆ ಕಂಡುಬರುತ್ತದೆ. ಬಹಾಯಿಗಳ ಪ್ರಕಾರ ಬಹಾಯಿ ಧರ್ಮವೇ ಅತ್ಯಂತ ಪ್ರಗತಿಪರ ಧರ್ಮ. ಇಲ್ಲಿ ಬಹಾಯಿ ಧರ್ಮ ಶಾಶ್ವತವಾಗಿ ಪ್ರಗತಿಪರವೋ ತಾತ್ಕಾಲಿಕವೋ ಎಂಬುದು ಸ್ಪಷ್ಟವಾಗುವುದಿಲ್ಲ.

	ವ್ಯಕ್ತಿಯನ್ನು ಕುರಿತ ಆಧ್ಯಾತ್ಮಿಕ ವಿಷಯಗಳು ಹೀಗಿವೆ; ಬಹಾಯಿಗಳ ಪ್ರಕಾರ ಸಾವು, ಮನುಷ್ಯ ತಾನು ಮುಂದೆ ಪಡೆಯಬಹುದಾದಂತಹ ಸ್ವರ್ಗ ಅಥವಾ ನರಕಗಳಿಗೆ ಒಂದು ಹೊಸ್ತಿಲಿದ್ದಂತೆ ಬಹಾಯಿಗಳು ಆತ್ಮನ ಅಮೃತತ್ವವನ್ನು ನಂಬುವರೆಂದು ಇದರಿಂದ ಸ್ಪಷ್ಟವಾಗುತ್ತದೆ.

	ಇವರ ಪ್ರಕಾರ ಸ್ವರ್ಗ ಎನ್ನುವುದು ದೈವಸನ್ನಿಧಿಯಿಂದ ಆತ್ಮನಿಗುಂಟಾಗುವ ಒಂದು ಆನಂದದ ಸ್ಥಿತಿ. ನರಕ ಎನ್ನುವುದು ದೈವಸನ್ನಿಧಿಯಿಂದ ದೂರವಾದ ಒಂದು ದುಃಖಸ್ಥಿತಿ. ಇಲ್ಲಿ ಎರಡು ಅಂಶಗಳು ಸ್ಪಷ್ಟವಾಗುತ್ತವೆ: ಒಂದು, ಹಿಂದೂ ಕಲ್ಪನೆಯಂತೆ ಸ್ವರ್ಗವೆಂಬುದು ಒಂದು ಭೋಗಸಾಮ್ರಾಜ್ಯವಲ್ಲ. ಇನ್ನೊಂದು, ಆತ್ಮನ ಸ್ವರ್ಗಪ್ರಾಪ್ತಿ ಹಿಂದೂ ಈಶ್ವರವಾದದ ವಿದೇಹ ಮುಕ್ತಿಯನ್ನು ಹೋಲುತ್ತದೆ. ಆತ್ಮನ ಮರಣಾನಂತರದ ಈ ಸ್ಥಿತಿಗಳಿಗೆ ಪ್ರಪಂಚದಲ್ಲಿ ಆತ್ಮ ಆಚರಿಸಿದ ಕರ್ಮಗಳೇ ಕಾರಣ ಎನ್ನಲಾಗಿದೆ. ಅವತಾರಪುರುಷರ ಉಪದೇಶಗಳಂತೆ ಮನುಷ್ಯ ಇಹಲೋಕದಲ್ಲಿ ನಡೆದುಕೊಂಡರೆ ಅತ ಮುಂದೆ ಸ್ವರ್ಗ ಪಡೆಯುತ್ತಾನೆ. ಇಲ್ಲದೆ ಹೋದರೆ ಅಂಧಕಾರದಲ್ಲಿ ತೊಳಲುತ್ತಾನೆ.

	ಸಾವಿಲ್ಲದ ಆತ್ಮ ಭೂಲೋಕದಲ್ಲಿ ಜನ್ಮವೆತ್ತಲು ಕಾರಣವೇನು? ಹಾಗೆ ಜನ್ಮವೆತ್ತುವ ಮುನ್ನ ಅವನು ಎಲ್ಲಿದ್ದ? ಭೂಲೋಕದಲ್ಲಿ ಮಾಡಿದ ಪಾಪದ ಫಲವಾಗಿ ಸತ್ತಮೇಲೆ ಆತ್ಮ ಅನುಭವಿಸು ನರಕದಿಂದ ಮುಕ್ತಿಯೇ ಇಲ್ಲವೆ? ಮುಕ್ತಿಯಿದ್ದಲ್ಲಿ ನರಕವಾಸ ಅನುಭವಿಸಿದ ಅನಂತರ ಆತ್ಮ ಎಲ್ಲಿಗೆ ಧಾವಿಸುವುದು? ಇವೇ ಮುಂತಾದ ಪ್ರಶ್ನೆಗಳನ್ನು ಬಹಾಯಿಧರ್ಮ ಪ್ರಸ್ತಾಪಿಸುವುದಿಲ್ಲ.

	ವ್ಯಕ್ತಿಯ ಅಧ್ಯಾತ್ಮಿಕ ಮತ್ತು ಸಾಮಾಜಿಕ ಕರ್ತವ್ಯಗಳನ್ನು ಕುರಿತು ಹೇಳುವಾಗ ವ್ಯಕ್ತಿ ಆಧ್ಯಾತ್ಮಿಕ ಪ್ರಗತಿ ಹೊಂದಲು ದೈವ ಪ್ರಾರ್ಥನೆ, ಉಪವಾಸ, ದುಡಿಮೆ ಮುಂತಾದ ಕರ್ತವ್ಯ ಮಾಡಬೇಕು ಎನ್ನಲಾಗಿದೆ. ದೈವಪ್ರಾರ್ಥನೆಗೆ ಅವಶ್ಯವಾಗಿ ಇರಬೇಕಾದುದು ಭಗವಂತನಲ್ಲಿ ಪ್ರಾಮಾಣಿಕ ಪ್ರೀತಿ ಮತ್ತು ಚಿತ್ತೈಕಾಗ್ರತೆ. ಮನುಷ್ಯ ತನ್ನ ಪಾಪವನ್ನು ನೀಗಿಕೊಳ್ಳಲೆಂದು ತಾನೇ ಭಗವಂತನನ್ನು ಪ್ರಾರ್ಥಿಸಬೇಕು. ಪುರೋಹಿತರಿಂದ ಮಾಡಿಸುವುದು ಬಹಾಯಿ ಸಂಪ್ರದಾಯಕ್ಕೆ ವಿರೋಧವಾದುದು. ಆದರೆ ಸತ್ತವರ ಹೆಸರಿನಲ್ಲಿ ಪ್ರಾರ್ಥನೆ ನಡೆಸುವುದಕ್ಕೆ ಅನುಮತಿಯುಂಟು. ಪ್ರಾರ್ಥನೆಗೆಂದು ಬಳಸುವ ಪದ್ಯಗಳೇ ಬಾಬ್ ಬಹಾವುಲ್ಲ ಮತ್ತು ಅಬ್ದುಲ್ ಬಹಾ ಅವರಿಂದ ರಚಿತವಾದವು. ಒಂದು ವೈಶಿಷ್ಟವೆಂದರೆ ಪ್ರಾರ್ಥನೆಯಲ್ಲಿ ಇತರ ಧರ್ಮಗ್ರಂಥಗಳಿಂದ ಆಯ್ದ ಪದ್ಯಗಳನ್ನು ಉಚ್ಚರಿಸಬಹುದು ಮತ್ತು ಪ್ರಾರ್ಥನೆಯಲ್ಲಿ ಇತರ ಪಂಥಿಯರು ಭಾಗವಹಿಸಬಹುದು.

	ಆಹಾರವಿಷಯದಲ್ಲಿ ಅಷ್ಟೇನೂ ನಿಬಂಧನೆಗಳಿರದಿದ್ದರೂ ಮತ್ತು ಬರಿಸುವಂಥ ಔಷಧಿ ಅಥವಾ ಪಾನೀಯ ಸೇವನೆ ಬಹಾಯಿಗಳಿಗೆ ನಿಷಿದ್ಧ. ಆದರೆ ಹೊಗೆಸೊಪ್ಪು ಸೇವನೆಗೆ ಅನುಮತಿಯುಂಟು. ಉಪವಾಸವ್ರತ ದುರ್ಬಲರು, ವೃದ್ಧರು, ಹೆಂಗಸರ ಹೊರತಾಗಿ ಎಲ್ಲರೂ ಅವಶ್ಯವಾಗಿ ಪಾಲಿಸಬೇಕಾದ ಕರ್ತವ್ಯ. ಉಪವಾಸ ಮಾಡುವುದಕ್ಕೆ ನಿಗದಿಯಾದ ದಿನಗಳು ವರ್ಷದ ಕಡೆಯ ತಿಂಗಳು (ಹತ್ತೊಂಬತ್ತು ದಿನಗಳು). ಉಪವಾಸಕಾಲದಲ್ಲಿ ಸೂರ್ಯೋದಯ ಸೂರ್ಯಾಸ್ತಗಳ ನಡುವೆ ನಿರಾಹಾರಿಗಳಾಗಿರಬೇಕು. ಆದರೆ ಸೂರ್ಯೋದಯಕ್ಕೆ ಮುನ್ನ ಸ್ವಲ್ಪ ಆಹಾರ ಸೇವಿಸಬಹುದು. ಶುಚಿತ್ವ ಅವಶ್ಯವಾಗಿ ಪಾಲಿಸಬೇಕಾದ ಕರ್ತವ್ಯ. ದುಡಿಮೆಯಿಲ್ಲದ ಮೈಗಳ್ಳತನ ಜೀವನ ತುಚ್ಛ, ಪರೋಪಕಾರಭಾವನೆಯಿಂದ ಮಾಡುವ ಭಗವಧಾರಾಧನೆಗೆ ಸಮ.

	ಬಹಾಯಿ ಸಮಾಜ ಕುರಿತ ವಿಷಯಗಳು ಹೀಗಿವೆ: ಈ ಸಮಾಜದಲ್ಲಿ ಪ್ರತಿಯೊಬ್ಬನಿಗೂ ಶಿಕ್ಷಣ ಕಡ್ಡಾಯ. ತನ್ನ ಮಕ್ಕಳಿಗೆ ಶಿಕ್ಷಣ ಕೊಡಿಸಲು ಅಸಮರ್ಥನಾದ ತಂದೆಗೆ ಧಾರ್ಮಿಕ ಸಮಿತಿಯೇ ತನ್ನ ನಿಧಿಯಿಂದ ಅವಶ್ಯ ಹಣವನ್ನು ಒದಗಿಸುತ್ತದೆ. ವಿದ್ಯಾವಂತ ಮಹಿಳೆ ತನ್ನ ಮಕ್ಕಳನ್ನು ಸಮಾಜದ ಯೋಗ್ಯ ಸದಸ್ಯರಾಗಿ ಮಾಡಲು ಶಕ್ತಳಾದ್ದರಿಂದ ಮಹಿಳೆಗೆ ಶಿಕ್ಷಣ ಹೆಚ್ಚು ಅವಶ್ಯಕ, ಶಿಕ್ಷಣ ಮಕ್ಕಳ ಆಧ್ಯಾತ್ಮಿಕ, ನೈತಿಕ ಹಾಗೂ ಬೌದ್ಧಿಕ ಪ್ರಗತಿಗೆ ಸಾಧ್ಯವಾಗುವಂತೆ ಇರಬೇಕು. ಶಿಕ್ಷಣ ಧರ್ಮ ಮತ್ತು ವಿಜ್ಞಾನ ಎರಡು ವಿಭಾಗಗಳನ್ನು ಒಳಗೊಂಡಿರಬೇಕು, ಮಾನವನ ಪ್ರಗತಿಪರ ಬದುಕಿಗೆ ವಿಜ್ಞಾನ ಸಹಾಯಕ. ಸಾಕಷ್ಟು ಧರ್ಮ ಜ್ಞಾನವಿಲ್ಲದೆ ಬರಿ ವಿಜ್ಞಾನದಲ್ಲಿ ಪ್ರಗತಿ ಸಾಧಿಸಿದರೆ ಮತಾಂಧತೆ ಅಂಧಾನುಕರಣೆ, ಸಮರ ಘರ್ಷಣೆಗಳಿಗೆ ಅವಕಾಶವಾಗುತ್ತದೆ.

	ಈ ಸಮಾಜದಲ್ಲಿ ಸ್ತ್ರೀಗೂ ಪುರುಷನಂತೆ ಸಮಾನ ಸ್ಥಾನವಿದೆ. ಧಾರ್ಮಿಕ ಜೀವನದಿಂದ ಸ್ತ್ರೀ ಸ್ವರ್ಗವನ್ನು ಪಡೆಯಲು ಯೋಗ್ಯಳು. ಧಾರ್ಮಿಕ ಸಮಿತಿಗಳ ಸದಸ್ಯತ್ವ ಪಡೆಯಲು ಅವಳಿಗೂ ಅರ್ಹತೆಯುಂಟು. ಸಮಾಜದಲ್ಲಿ ಐಶ್ವರ್ಯದ ಅಸಮಾನತೆ ಹೋಗಲಾಡಿಸಲು ತೆರಿಗೆ ಪದ್ಧತಿ ಜಾರಿಗೆ ಬರಬೇಕು. ಪ್ರತಿಯೊಬ್ಬನೂ ದುಡಿಮೆಯಿಂದಲೇ ಜೀವನ ನಡೆಸಬೇಕು. ತನ್ನ ಬದುಕಿಗೆ ಅವಶ್ಯವಾದುದಕ್ಕಿಂತಲೂ ಹೆಚ್ಚು ಸಂಪಾದಿಸುವವನಿಂದ ತೆರಿಗೆ ತೆಗೆದುಕೊಳ್ಳಬೇಕು. ತೆರಿಗೆಯ ಪ್ರಮಾಣ ವ್ಯಕ್ತಿಯ ಆದಾಯವನ್ನು ಅವಲಂಬಿಸಿರುತ್ತದೆ. ವ್ಯಕ್ತಿಯ ಸಂಪಾದನೆ ರೋಗ, ಕ್ಷಾಮ ಮುಂತಾದ ಕಾರಣಗಳಿಂದಾಗಿ ಅವನ ಜೀವನ ನಿರ್ವಹಣೆಗೆ ಸಾಕಾಗದಿದ್ದಲ್ಲಿ ಸಾರ್ವಜನಿಕ ನಿಧಿಯಿಂದ ಅವನ ಅವಶ್ಯಕತೆಯನ್ನು ಪೂರೈಸಬೇಕು.

	ವಿವಾಹ ಕಡ್ಡಾಯ, ವಿವಾಹಕ್ಕೆ ಮೊದಲು ವಧೂವರರಿಬ್ಬರಿಗೂ ನೈಷ್ಠಿಕ ಬ್ರಹ್ಮಚರ್ಯಪಾಲನೆ ಅವಶ್ಯ. ವಿವಾಹವಾಗುವ ವ್ಯಕ್ತಿಗಳು ಯಾವುದೇ ಜಾತಿ. ವರ್ಣ, ಧರ್ಮ, ರಾಷ್ಟ್ರಗಳಿಗೆ ಸೇರಿರಬಹುದು. ಆದರೆ ವಧೂವರರ ಮತ್ತು ಅವರ ಮಾತಾಪಿತೃಗಳ ಒಪ್ಪಿಗೆ ನೀಡುವ ಮಾತಾಪಿತೃಗಳಿಗೆ ಜಾತಿ ಇತ್ಯಾದಿ ಪೂರ್ವಾಗ್ರಹಗಳಿರದಿರುವುದು ಅವಶ್ಯಕ. ವರದಕ್ಷಿಣೆ ಪದ್ಧತಿಯಿಲ್ಲ. ಒಬ್ಬ ಬಹಾಯಿ ಒಬ್ಬನೇ ಅಥವಾ ಒಬ್ಬಳೇ ಸಂಗಾತಿಯನ್ನು ಆಯ್ದುಕೊಳ್ಳಬೇಕು. ವಿವಾಹ ವಿಚ್ಛೇದನಕ್ಕೆ ಮಾನ್ಯತೆಯಿಲ್ಲ. ಆದರೂ ಪರಸ್ಪರ ವೈಮನಸ್ಯ ಮೂಡಿದ ದಂಪತಿಗಳು ತಮ್ಮ ಸಂಬಂಧವನ್ನು ಕಡಿದುಕೊಳ್ಳಲು ಅನುಮತಿಯುಂಟು.

	ವ್ಯಕ್ತಿಯನ್ನು ಬಹಾಯಿಧರ್ಮಕ್ಕೆ ಮತಾಂತರಗೊಳಿಸಲು ಯಾವ ಧಾರ್ಮಿಕ ಅಚರಣೆಯೂ ಅವಶ್ಯವಿಲ್ಲ. ವ್ಯಕ್ತಿಗೆ ಪರಮಾತ್ಮ, ಧರ್ಮ, ಮಾನವಕುಲ-ಇವುಗಳ ಏಕತೆಯಲ್ಲಿ ಮತ್ತು ಬಹಾವುಲ್ಲಾರವರ ಬೋಧನೆಗಳಲ್ಲಿ ನಂಬಿಕೆಯಿದ್ದಲ್ಲಿ, ತನ್ನ ಈ ನಂಬಿಕೆಯನ್ನು ಅವನು ಪ್ರಮಾಣಪತ್ರವೊಂದರಲ್ಲಿ ವ್ಯಕ್ತಪಡಿಸಿ ಅದನ್ನು ರಾಷ್ಟ್ರೀಯ ಧಾರ್ಮಿಕ ಸಮಿತಿಗೆ ಕಳುಹಿಸಿದಲ್ಲಿ ಅವನು ಬಹಾಯಿಯಾದಂತೆ.

	ಇದು ಬಹಾಯಿಧರ್ಮದ ಒಂದು ಸ್ಥೂಲನಿರೂಪಣೆ. ಪ್ರಪಂಚದ ಐಕ್ಯಕ್ಕಾಗಿ ಪ್ರಪಂಚದಲ್ಲೆ ಶಾಂತಿಸ್ಥಾಪನೆಗಾಗಿ, ಮನುಷ್ಯನಲ್ಲಿ ದೈವಿಕ ಭಾವನೆ ಮೂಡಿಸಲು ಎಲ್ಲ ಧರ್ಮಗಳನ್ನು ಒಗ್ಗೂಡಿಸಲು ಬಹಾವುಲ್ಲಾರು ಸತತವಾಗಿ ದುಡಿದರು. ಅದಕ್ಕಾಗಿ ಅವರು ಅನೇಕ ಕಷ್ಟಗಳನ್ನು ಅನುಭವಿಸಿದರು. ಅವರ ಶ್ರಮದ ಫಲವಾಗಿ ಬಹಾಯಿ ಧರ್ಮ ಇಂದು ಒಂದು ವಿಶ್ವಧರ್ಮವಾಗಿ ಪರಿಣಮಿಸಿದೆ.
(ಎಸ್.ಎಸ್.ಅರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ